ಪ್ರಾಕೃತಾವಸ್ಥೆ- 

	ಪ್ರಪಂಚದಲ್ಲಿ ರಾಜ್ಯ ಅಸ್ತಿತ್ವಕ್ಕೆ ಬರುವುದಕ್ಕಿಂತ ಮುಂಚಿನ ಅವಸ್ಥೆ (ಸ್ಟೇಟ್ ಅಫ್ ನೇಚರ್). ರಾಜ್ಯದ ಉಗಮ, ಸ್ವರೂಪ ಇವನ್ನು ಅರ್ಥಮಾಡಿಕೊಳ್ಳಲು ಹಲವಾರು ಚಿಂತನಶೀಲರು ರಾಜ್ಯಪೂರ್ವಸ್ಥಿತಿಯನ್ನು ಕುರಿತು ಊಹೆ ನಡೆಸಿದ್ದಾರೆ. ಭಾರತೀಯ ರಾಜನೀತಿಶಾಸ್ತ್ರದಲ್ಲಿ ಬರುವ ಮಾತ್ಸ್ಯನ್ಯಾಯದ ಕಲ್ಪನೆಗೂ ಪಾಶ್ಚಾತ್ಯರ ಊಹನೆಯ ಪ್ರಾಕೃತಾವಸ್ಥೆಗೂ ಹೋಲಿಕೆಯನ್ನು ಕಾಣಬಹುದು. ರಾಜ್ಯದ ಉಗಮಕ್ಕೆ ಮೊದಲಿನ ಅವಸ್ಥೆಯಲ್ಲಿದ್ದ ಮಾತ್ಸ್ಯನ್ಯಾಯದ ತೊಂದರೆಗಳಿಂದ ವಿಮೋಚನೆ ಪಡೆಯಲು ರಾಜ್ಯವನ್ನು ಸ್ಥಾಪಿಸಲಾಯಿತು. ರಾಜ್ಯವಿಲ್ಲದಿದ್ದರೆ, ಎಂದರೆ ಮನುಷ್ಯರು ಅವರ ಪ್ರಾಕೃತಾವಸ್ಥೆಯಲ್ಲೇ ಮುಂದುವರಿದರೆ ಮಾತ್ಸ್ಯನ್ಯಾಯ ತಪ್ಪದು, ಎಂದರೆ ಬಲಿಷ್ಠರು ದುರ್ಬಲರನ್ನು ನುಂಗಿಹಾಕುವ ನಾಶಗೊಳಿಸುವ ಪರಿಸ್ಥಿತಿಯ ನಿವಾರಣೆಯಾಗದು. ದುಷ್ಟರನ್ನು ದಂಡಿಸಿ ಶಿಷ್ಟರನ್ನು ಪಾಲಿಸಲು ರಾಜ್ಯ ಅಗತ್ಯವೆಂದು ಹೇಳಲಾಗಿದೆ.

	ಇದನ್ನು ಕುರಿತ ಪಾಶ್ಚಾತ್ಯಚಿಂತನ ಪರಂಪರೆಯನ್ನು ಪ್ರಾಚೀನ ಗ್ರೀಕ್ ಚಿಂತಕರು ಆರಂಭಿಸಿದರು. ಪ್ರಾಕೃತಾವಸ್ಥೆಯಲ್ಲಿ ಮನುಷ್ಯರು ಪ್ರಕೃತಿಗೆ ಅನುಗುಣವಾಗಿ ವರ್ತಿಸುವರೆಂದು ಸೋಫಿಸ್ಟರೆಂಬ ಸಂಚಾರಿ ಬೋಧಕರು ಹೇಳಿದ್ದಾರೆ. ಪ್ರಾಕೃತಾವಸ್ಥೆಯಲ್ಲಿ ಯಾವುದೇ ಬಗೆಯ ಬಾಹ್ಯಕಟ್ಟಳೆ ಮತ್ತು ನಿಯಮಗಳಿರುವುದಿಲ್ಲ. ಇಂಥ ಅವಸ್ಥೆಯನ್ನು ಕೆಲವರು ಸ್ವರ್ಣಯುಗವೆಂದು ಭಾವಿಸಿ, ಮಾನವ ನೈತಿಕ ಪತನದಿಂದ ಪರಿಸ್ಥಿತಿ ಹದಗೆಟ್ಟು ರಾಜ್ಯದ ಅವಶ್ಯಕತೆ ಉಂಟಾಯಿತೆಂದು ವಾದಿಸಿದ್ದಾರೆ. ಪ್ರಾಕೃತಾವಸ್ಥೆ ಆರಂಭದಿಂದಲೇ ಸಂಘರ್ಷಮಯವಾಗಿತ್ತೆಂದೂ ಸ್ವಭಾವಸಿದ್ಧವಾದ ಈ ನ್ಯೂನತೆಯನ್ನು ಹತ್ತಿಕ್ಕಲು ರಾಜ್ಯವನ್ನು ನಿರ್ಮಿಸಲಾಯಿತೆಂದೂ ಇನ್ನೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

	ಅನಂತರ ಮಧ್ಯಯುಗದ ಕೊನೆಯವರೆಗೂ ಈ ವಾದಸರಣಿಯಲ್ಲಿ ಗಮನಾರ್ಹ ಬೆಳವಣಿಗೆಗಳಾಗಲಿಲ್ಲ. ಆಧುನಿಕ ಯುಗದಲ್ಲಿ ಇದು ಪುನರುಜ್ಜೀವನಗೊಂಡು ಪ್ರಾಮುಖ್ಯಗಳಿಸಿತು. ಆಧುನಿಕಯುಗದಲ್ಲಿ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದವರಲ್ಲಿ ಮುಖ್ಯರಾದವರೆಂದರೆ ಹಾಬ್ಸ್, ಲಾಕ್ ಮತ್ತು ರೂಸೋ.

	ಹಾಬ್ಸನ ಪ್ರಕಾರ ಮನುಷ್ಯ ಸ್ವಭಾವತಃ ಸ್ವಾರ್ಥಿ. ಆತ್ಮರಕ್ಷಣೆಯ ಮತ್ತು ಸ್ವಂತ ಬಲದ ವೃದ್ಧಿಯ ಹಂಬಲಗಳೇ ಅವನ ಮನಸ್ಸಿನ ಪ್ರಬಲವಾದ ಪ್ರವೃತ್ತಿಗಳು. ಇತರರನ್ನು ಹತ್ತಿಕ್ಕಿ ಹೆಚ್ಚು ಹೆಚ್ಚು ಲಾಭ ಪಡೆಯುವುದಕ್ಕಾಗಿ ಸದಾ ಹೋರಾಟದಲ್ಲಿ ನಿರತನಾಗಿರುವುದೇ ಸಹಜ ಪ್ರವೃತ್ತಿ. ಪ್ರಾಕೃತಾವಸ್ಥೆಯಲ್ಲಿ ಸಭ್ಯತೆ ಸಂಸ್ಕøತಿಗಳು ಹಾಗಿರಲಿ, ಜೀವಸಹಿತ ಉಳಿಯುವುದೇ ಅವನ ಮುಖ್ಯ ಸಮಸ್ಯೆಯಾಗಿರುತ್ತದೆ. ಸರ್ವಶಕ್ತವಾದ ರಾಜ್ಯದ ಸ್ಥಾಪನೆಯಿಂದಲೇ ಜೀವರಕ್ಷಣೆ ಸಾಧ್ಯವೆಂಬುದು ಅರಿವಿಗೆ ಬಂತು. ಇಂಥ ಆಲೋಚನೆಯ ಫಲವಾಗಿ ರಾಜ್ಯ ಸ್ಥಾಪನೆಯಾಯಿತು. ಪ್ರಬಲ ಮತ್ತು ನಿರಂಕುಶ ರಾಜ್ಯದ ಹೊರತು ಭದ್ರತೆ, ಶಾಂತಿ, ಸಭ್ಯತೆ ಮತ್ತು ಸಂಸ್ಕøತಿ ಅಸಾಧ್ಯವೆಂದು ಹಾಬ್ಸ್ ಹೇಳಿದ.

	ಪ್ರಾಕೃತಾವಸ್ಥೆಯನ್ನು ಕುರಿತಂತೆ ಲಾಕನ ವಿಚಾರಗಳು ಹಾಬ್ಸನ ವಿಚಾರಗಳಿಗಿಂತ ತೀರ ಭಿನ್ನವಾದಂಥವು. ಪ್ರಾಕೃತಾವಸ್ಥೆಯಲ್ಲಿ ಮಾನವರು ಪ್ರಕೃತಿ ನಿಯಮವನ್ನು ಅನುಸರಿಸಿ ನೀತಿಯಿಂದಲೂ ವಿವೇಕದಿಂದಲೂ ವರ್ತಿಸುತ್ತಾರೆ. ಸಮಾಜದಲ್ಲಿ ಶಾಂತಿ ಸಹಕಾರಗಳು ನೆಲೆಸಿರುತ್ತವೆ. ಆದರೂ ಈ ಅವಸ್ಥೆಯಲ್ಲಿ ಕೆಲವು ಬಿಕ್ಕಟ್ಟುಗಳು ಉದ್ಭವಿಸುತ್ತವೆ. ಮನುಷ್ಯ ಸ್ವಾಭಾವಿಕವಾಗಿ ಒಳ್ಳೆಯವನಾದರೂ ಅವನು ಪರಿಪೂರ್ಣನಲ್ಲ. ಸ್ವಾರ್ಥ ಮತ್ತು ಇತರ ಆಕಾಂಕ್ಷೆಗಳು ಅವನ ಮನಸ್ಸನ್ನು ಕಲುಷಿತಗೊಳಿಸುತ್ತವೆ. ಇಂಥ ಸ್ಥಿತಿಯಲ್ಲಿ ಪ್ರಾಕೃತಿಕ ಹಕ್ಕುಗಳು ಭದ್ರವಾಗಿರುವುದಿಲ್ಲ. ಈ ಬಿಕ್ಕಟ್ಟುಗಳನ್ನು ನಿವಾರಿಸುವುದಕ್ಕಾಗಿ ಮತ್ತು ಪ್ರಾಕೃತ ಹಕ್ಕುಗಳನ್ನು ಭದ್ರಪಡಿಸುವುದಕ್ಕಾಗಿ ಮನುಷ್ಯರು ರಾಜ್ಯವನ್ನು ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳುತ್ತಾರೆ. ರಾಜ್ಯಕ್ಕೆ ಸೀಮಿತ ಅಧಿಕಾರಗಳಿರುತ್ತವೆ. ನಿರ್ಣಯಗಳನ್ನು ಪ್ರಜಾತಾಂತ್ರಿಕವಾಗಿ, ಬಹುಮತದ ಆಧಾರದ ಮೇಲೆ, ತೆಗೆದುಕೊಳ್ಳಬೇಕಾಗುತ್ತದೆ. ಅಧಿಕಾರ ಒಬ್ಬನ ಅಥವಾ ಕೆಲವೇ ಜನರ ಕೈಯಲ್ಲಿದ್ದರೆ ಸ್ವಾರ್ಥವೇ ಮೊದಲಾದ ದೋಷಗಳಿಂದ ಮತ್ತೆ ಪ್ರಾಕೃತಾವಸ್ಥೆಯ ಬಿಕ್ಕಟ್ಟುಗಳು ಉಂಟಾಗುತ್ತವೆ. ಆದ್ದರಿಂದ ಪ್ರಜಾತಂತ್ರ ರಾಜ್ಯ ಪದ್ದತಿಯೇ ಸೂಕ್ತವಾದ್ದೆಂದು ಲಾಕ್ ಪ್ರತಿಪಾದಿಸಿದ.

	ಪ್ರಾಕೃತಾವಸ್ಥೆ ಕುರಿತಂತೆ ರೂಸೋನ ಕಲ್ಪನೆ ಲಾಕನದಕ್ಕಿಂತಲೂ ಉದಾತ್ತವಾಗಿದೆ, ಮಾನವ ಮೂಲತಃ ಪಾಪ-ಪುಣ್ಯಗಳನ್ನರಿಯದವನು. ಪ್ರಾಕೃತಾವಸ್ಥೆಯಲ್ಲಿ ಮಾನವನ ಜೀವನ ಅತ್ಯಂತ ಸುಖಮಯವಾಗಿರುತ್ತದೆ. ಆದರೆ ಕಾಲಕ್ರಮದಲ್ಲಿ ನೈತಿಕ ಪತನ ಆರಂಭವಾಗುತ್ತದೆ. ಮನುಷ್ಯನಲ್ಲಿ ಸ್ವಾರ್ಥ ಮತ್ತು ಸ್ಪರ್ಧೆಯ ಭಾವನೆಗಳ ಮೂಡುವಿಕೆ ಈ ಪತನಕ್ಕೆ ಮುಖ್ಯಕಾರಣ. ಸುಖಸಂಪತ್ತುಗಳ ಆಕಾಂಕ್ಷೆಯಿಂದ ಮಾನವನ ನೈತಿಕ ಪತನವಾಗುತ್ತದೆ. ಸಮಾಜದಲ್ಲಿ ದಬ್ಬಾಳಿಕೆ ಮತ್ತು ವೈಷಮ್ಯಗಳು ಹುಟ್ಟುತ್ತವೆ. ಇವನ್ನು ಕೊನೆಗೊಳಿಸಿ ಪ್ರಾಕೃತಾವಸ್ಥೆಗೆ ಹಿಂದಿರುಗುವುದು ಸಾಧ್ಯವಿಲ್ಲ. ಏಕೆಂದರೆ ಇತಿಹಾಸದ ಚಕ್ರವನ್ನು ಹಿಂತಳ್ಳಿದರೆ ಅದೇ ಪ್ರವೃತ್ತಿ ಬಲಗೊಳ್ಳುತ್ತದೆ. ಸಮಾಜದಲ್ಲಿ ದಬ್ಬಾಳಿಕೆ ಮತ್ತು ವೈಷಮ್ಯಗಳನ್ನು ನಿವಾರಿಸಬೇಕಾದರೆ ಇರುವುದು ಒಂದೇ ಮಾರ್ಗ: ಸ್ವಾತಂತ್ರ್ಯ. ಮತ್ತು ಸಮಾನತೆಯನ್ನು ಸಾಧಿಸುವ ರಾಜ್ಯವ್ಯವಸ್ಥೆ ಎಂದರೆ ನಿಜವಾದ ಪ್ರಜಾತಂತ್ರ. ಇಂಥ ಪ್ರಜಾತಂತ್ರ ಕೇವಲ ಬಾಹ್ಯ ಅಡಂಬರಗಳಿಗೆ ಸೀಮಿತವಾಗಿರದೆ ಜನಮನಗಳ ನಿಜವಾದ ಸಾಮಂಜಸ್ಯವನ್ನು ಆಧರಿಸಬೇಕು. ಈ ಸಾಮಂಜಸ್ಯ ವೈಯಕ್ತಿಕ ಪರಿಮಿತಿಗಳನ್ನು ತ್ಯಜಿಸಿ, ರಾಜ್ಯದಲ್ಲಿರುವ ಎಲ್ಲ ಜನರ ನೀತಿಯ ಮತ್ತು ವಿವೇಕದ ಸಾಂಘಿಕ ಅಭಿವ್ಯಕ್ತಿಯಾಗಿರಬೇಕು.

	ಫ್ರೆಂಚ್ ಕ್ರಾಂತಿಯ ಫಲವಾದ ಪ್ರಜಾತಂತ್ರ ರಾಜ್ಯಪದ್ಧತಿಯ ಬೆಳವಣಿಗೆಯ ಮೇಲೆ ರೂಸೋ ಬಹಳ ವ್ಯಾಪಕವಾದ ಪ್ರಭಾವ ಬೀರಿದ.
(ಎಸ್.ಎಚ್.ಐವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ